Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 28

51:28
فَأَوۡجَسَ مِنۡهُمۡ خِيفَةٗۖ قَالُواْ لَا تَخَفۡۖ وَبَشَّرُوهُ بِغُلَٰمٍ عَلِيمٖ ٢٨
(ಅವರು ತಿನ್ನಲಿಲ್ಲ) ಆಗ ಇಬ್‍ರಾಹೀಮರು ಅವರ ಬಗೆಗೆ ಅಂಜಿದರು. ಆಗ ಅತಿಥಿಗಳು; `ತಾವು ಹೆದರಬೇಡಿ’ ಎಂದರು ಮತ್ತು ಅವರಿಗೆ ಓರ್ವ ಸುಜ್ಞಾನಿ ಪುತ್ರನು ಜನಿಸುವನೆಂಬ ಸುವಾರ್ತೆ ನೀಡಿದರು1.
Footnotes
  • [1] ಇಲ್ಲಿನ ಮೂರು ಆಯತ್‍ಗಳು ಆತಿಥ್ಯದ ಮಹತ್ವಕ್ಕೆ ನಿದರ್ಶನ. ಅತಿಥಿಗಳು ಪ್ರವೇಶಿಸುವಾಗ ಸಲಾಮ್ ಹೇಳಿದ್ದು, ನಬಿಯವರು ಪ್ರತಿ ಸಲಾಮ್ ಹೇಳಿ ‘ಅಪರಿಚಿತರಾದ ಅತಿಥಿಗಳು’ ಎಂದು ಸ್ವಾಗತ ಕೋರಿದ್ದು ಅನುಕರಣೀಯ. ಅತಿಥಿಗಳು ತಿನ್ನದಿರುವಾಗ “ನೀವು ತಿನ್ನುವುದಿಲ್ಲವೇ?” ಎಂದು ಕೇಳಿದ ಮಾತಿನಲ್ಲಿರುವ ಮಾರ್ದವತೆ ಗಮನಿಸಿ, ಆತಿಥ್ಯ ನೀಡಿದ ಕರು ಕೊಬ್ಬಿದ್ದಾಗಿತ್ತು. ಇದು ಆತಿಥ್ಯದಲ್ಲಿ ಧಾರಾಳಿತನಕ್ಕೆ ನಿದರ್ಶನ. ಆ ಕಾಲದಲ್ಲಿ ಆ ದೇಶದಲ್ಲಿ ಅತ್ಯುನ್ನತ ಮಟ್ಟದ ಆಹಾರವಾಗಿತ್ತು ದನದ ಮಾಂಸ. ‘ಇಜ್‍ಲ್’ ಅಂದರೆ ಗಂಡು ಕರುವಿಗೂ ಹೆಣ್ಣು ಕರುವಿಗೂ ಅನ್ವಯ. ಇಲ್ಲಿ ಆತಿಥ್ಯದಲ್ಲಿ ಗಮನಿಸಬೇಕಾದ ಒಂದು ಮಾದರಿಯೇನೆಂದರೆ ಇಬ್‍ರಾಹೀಮ್ ನಬಿಯವರು ಅತಿಥಿಗಳು ಕೂತಲ್ಲಿಗೇ ಆಹಾರ ತಂದು ಇರಿಸಿದರು ಎಂಬುದು. ಕೂತವರನ್ನು ಎಬ್ಬಿಸಿ ಬೇರೊಂದು ಕಡೆಗೆ ಊಟಕ್ಕೆ ನಡೆಸುವುದಕ್ಕಿಂತ ಕೂತಲ್ಲಿಗೇ ತಂದಿಡುವುದು ದೊಡ್ಡ ಮರ್ಯಾದೆ. ಊಟ ಬೇರೆಡೆ ಇಟ್ಟು ಅಲ್ಲಿಗೆ ನಡೆಸಿದಾಗ ನೂಕು ನುಗ್ಗಲುಂಟಾಗುವುದು. ಮಾನ್ಯ ವ್ಯಕ್ತಿಗಳು ಕೂಡಾ ನೂಕು ನುಗ್ಗಲಿಗೆ ಸಿಲುಕಿ ಎಲ್ಲರೂ ತಿನ್ನಲಿಕ್ಕೆಂದೇ ಬಂದವರೆಂಬ ದೃಶ್ಯ ಮೂಡಿಸುವುದು ಮುಂತಾದ ಅನಿಷ್ಟಗಳುಂಟಾಗುತ್ತವೆ. ಅಲ್ಲದೆ ಒಂದು ಮಜ್ಲಿಸ್‍ನಲ್ಲಿ ಯಾರ್ಯಾರು ಎಲ್ಲೆಲ್ಲಿ ಕೂತುಕೊಳ್ಳಬೇಕು ಎಂಬ ಲಿಖಿತ ವ್ಯವಸ್ಥೆ ಇರುತ್ತದೆ. ಸಾದಾತ್‍ಗಳು, ವಿದ್ವಾಂಸರು, ಇತರ ಅತಿ ಗಣ್ಯವ್ಯಕ್ತಿಗಳು ಹಾಗೂ ಇತರ ಸಾಮಾನ್ಯ ಜನರು ಅವರವರ ಸ್ಥಾನಮಾನದ ದರ್ಜೆಯ ಪ್ರಕಾರ ಕೂತಿರುತ್ತಾರೆ. ಊಟಕ್ಕಾಗಿ ಅವರನ್ನು ಏಳಿಸಿ ಬೇರೆಡೆಗೆ ನಡೆಸಿದಾಗ ಈ ಘಟನೆಯೆಲ್ಲ ತಪ್ಪಿ ಹೋಗುತ್ತದೆ. ಇಂತಹ ಅನೇಕ ಕಾರಣಗಳಿಂದ ಅತಿಥಿಗಳು ಇರುವಲ್ಲಿಗೇ ಊಟ ತಂದಿಡುವುದು ಉತ್ತಮ ಎಂಬ ಆಶಯವನ್ನು ಈ ಆಯತ್ ಕಲಿಸುತ್ತದೆ. ಲೂಥ್ ನಬಿಯವರ ಜನಾಂಗದ ನಿರ್ನಾಮಕ್ಕೆ ಬಂದವರು ಇಬ್‍ರಾಹೀಮ್ ನಬಿಯವರ ಬಳಿ ಮೊದಲು ಬಂದರು. ಯಾಕೆಂದರೆ ಲೂಥ್ ನಬಿಯವರು ಇಬ್‍ರಾಹೀಮ್ ನಬಿಯವರ ಜನತೆಗೆ ಸೇರಿದ ಓರ್ವ ವ್ಯಕ್ತಿಯೂ ಇಬ್ರಾಹೀಮ್ ನಬಿಯವರ ಸಹಾಯಕ ಪ್ರವಾದಿ ಎಂಬ ಸ್ಥಾನದಲ್ಲಿದ್ದವರೂ ಆಗಿದ್ದರು. ಇಬ್‍ರಾಹೀಮ್ ನಬಿಯವರು ಶೈಖುಲ್ ಮುರ್ಸಲೀನ್ (ಪ್ರವಾದಿಗಳ ಹಿರಿಯ ನಾಯಕ) ಆಗಿದ್ದರು. ಒಂದು ದಿಕ್ಕಿನಲ್ಲಿ ನಡೆಸುವ ಯಾವುದೇ ಕಾರ್ಯಕ್ರಮದ ಬಗ್ಗೆ ಸೂಚನೆ ಹಾಗೂ ಅಭಿಪ್ರಾಯ ಕೇಳಲು ಪ್ರಧಾನ ವ್ಯಕ್ತಿಯ ಬಳಿ ಮೊದಲು ಹೋಗಬೇಕು ಎಂಬ ಸೂಚನೆ ಇದರಲ್ಲಿದೆ. ಅದೇ ಸಂದರ್ಭದಲ್ಲಿ ಇಬ್‍ರಾಹೀಮ್ ನಬಿಯವರಿಗೆ ಗಂಡು ಮಗುವೊಂದು ಜನಿಸಲಿರುವ (ಇಸ್ಹಾಕ್) ಬಗ್ಗೆ ಸುವಾರ್ತೆಯನ್ನು ಕೊಟ್ಟದ್ದರಲ್ಲಿ ಒಂದು ಮರ್ಮವಿದೆ. ಇಬ್‍ರಾಹೀಮ್ ನಬಿಯವರು ತುಂಬ ಮೃದು ಹಾಗೂ ಆಧ್ರ್ರ ಮನಸ್ಸಿನವರಾಗಿದ್ದರು. ಒಂದು ಜನಾಂಗದವರ ನಾಶ ಅವರಿಂದ ಸಹಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ನಿರ್ನಾಮದ ಅನಿವಾರ್ಯತೆಯನ್ನು ಹೇಳಿ ಅವರ ಮನವೊಲಿಸುವುದು ಹಾಗೂ ಆ ಜನಾಂಗ ನಾಶವಾದರೂ ಅದಕ್ಕೆ ಬದಲಾಗಿ ತಮಗೆ ಜನಿಸುವ ಮಗುವಿನ ಸಂತತಿಯಲ್ಲಿ ಒಂದು ಉತ್ತಮ ಜನ ವಿಭಾಗ ಇಲ್ಲಿ ಹುಟ್ಟಿ ಬರಲಿದೆ ಎಂಬ ಸೂಚನೆ ಕೊಡುವುದಾಗಿತ್ತು ಆ ಮರ್ಮ. (ತಫ್ಸೀರ್ ರಾಝಿ 28 : 210)