Kannada Translation

Ayah by Ayah

Tags

Download Links

Kannada Translation translation for Surah Sad — Ayah 34

38:34
وَلَقَدۡ فَتَنَّا سُلَيۡمَٰنَ وَأَلۡقَيۡنَا عَلَىٰ كُرۡسِيِّهِۦ جَسَدٗا ثُمَّ أَنَابَ ٣٤
ಸುಲೈಮಾನರನ್ನು ನಾವು ಪರೀಕ್ಷೆಗೊಳಪಡಿಸಿದೆವು. ಅವರ ಸಿಂಹಾಸನದ ಮೇಲೆ ಒಂದು ಜಡಶರೀರವನ್ನು ತಂದು ಹಾಕಿದೆವು1. ಅನಂತರ ಅವರು ಪಶ್ಚಾತ್ತಾಪಪಟ್ಟು ಮರಳಿದರು.
Footnotes
  • [1] ಆ ಜಡ ಶರೀರ ಯಾವುದು ಎಂಬುದಕ್ಕೆ ನಂಬಲರ್ಹ ವರದಿಗಳು ಬಂದಿಲ್ಲ. ಆದರೆ ಈ ಘಟನೆಗೆ ಹೆಚ್ಚು ಹತ್ತಿರವಾಗುವ ಬುಖಾರಿ ಮುಸ್ಲಿಮ್ ಉಲ್ಲೇಖಿಸಿದ ಒಂದು ಹದೀಸಿನ ಸಂಕ್ಷಿಪ್ತ ಸಾರ ಹೀಗಿದೆ; ಒಂದು ರಾತ್ರಿ ತನ್ನ ಹಲವು ಪತ್ನಿಯರೊಂದಿಗೆ ದೇಹ ಸಂಪರ್ಕ ನಡೆಸುವೆ. ಆ ಮೂಲಕ ಅವರೆಲ್ಲರೂ ಒಂದೊಂದು ಗಂಡು ಮಗುವಿಗೆ ಜನ್ಮ ನೀಡಲಿದ್ದಾರೆ. ಆ ಮಕ್ಕಳು ದೀನಿಗಾಗಿ ಹೋರಾಡುವ ವೀರ ಅಶ್ವಯೋಧರಾಗುವರು ಎಂದು ಸುಲೈ ಮಾನ್ ನಬಿಯವರು ಹೇಳಿದರು. ಆದರೆ ‘ಇನ್ ಶಾ ಅಲ್ಲಾಹ್’ ಹೇಳಲು ಮರೆತುಬಿಟ್ಟರು. ಈ ಕಾರಣದಿಂದ ಆ ರಾತ್ರಿಯ ದೇಹ ಸಂಪರ್ಕದಲ್ಲಿ ಓರ್ವ ಪತ್ನಿಗೆ ಮಾತ್ರ ಒಂದು ಮಗುವುಂಟಾಯಿತು. ಅದೂ ಕೂಡಾ ಅಪೂರ್ಣ ಶಿಶುವಾಗಿತ್ತು. ಉಳಿದವರಿಗೆ ಮಗುವೇ ಆಗಲಿಲ್ಲ. ಇನ್ ಶಾ ಅಲ್ಲಾಹ್ ಹೇಳಿ ದ್ದರೆ ಎಲ್ಲರಲ್ಲೂ ಅಶ್ವಯೋಧರಾದ ಮಕ್ಕಳು ಉಂಟಾಗುತ್ತಿದ್ದರು. ಇದು ಹದೀಸಿನ ಸಂಕ್ಷಿಪ್ತ ಸಾರ. ಅಪೂರ್ಣ ಶಿಶುವನ್ನು ಅವರ ಬಳಿ ತಂದಾಗ ರಾಜಾ ಸನದಲ್ಲಿದ್ದ ಅವರು ಅದನ್ನು ತನ್ನ ಮಡಿಲಲ್ಲಿ ಇರಿಸಿದರು. “ರಾಜಾಸನದ ಮೇಲೆ ‘ಜಡ’ವನ್ನು ಹಾಕಿದೆವು ಎಂಬ ವಾಕ್ಯದ ತಾತ್ಪರ್ಯ ಇದುವೇ ಎಂಬ ವ್ಯಾಖ್ಯಾನವು ಅತ್ಯಂತ ಸೂಕ್ತವಾದುದು ಎಂದಿದ್ದಾರೆ ಇಮಾಮ್ ಬೈಳಾವಿ. ಈ ಘಟನೆಯ ಬಗ್ಗೆ ಅನೇಕ ಕಟ್ಟು ಕಥೆಗಳು ಪ್ರಚಲಿತದಲ್ಲಿವೆ. ಪೂರ್ವ ಪ್ರವಾದಿಗಳ ಬಗ್ಗೆ ಜೂದ - ಕ್ರೈಸ್ತರ ವೇದಗ್ರಂಥಗಳಲ್ಲಿ ಅನೇಕ ಕಟ್ಟುಕಥೆಗಳು ಸೇರ್ಪಡೆಯಾಗಿರುವುದು ಸುವಿಧಿತ. ಸುಲೈಮಾನ್ ನಬಿಯವರ ಇಂತಹ ಘಟನೆಗಳ ಹೆಸರಲ್ಲಿ ಅಂತೆ ಕಂತೆಗಳು ಧಾರಾಳ ಇವೆ. ಇದೇ ಸೂರಾದ 40ನೇ ಆಯತ್‍ನಲ್ಲಿ “ಸುಲೈಮಾನರು ನನ್ನ ಸಮೀಪಸ್ಥರು, ನನ್ನ ಬಳಿಗೆ ಅವರಿಗೆ ಶ್ರೇಷ್ಟ ನಿರ್ಗಮನವಿದೆ” ಎಂದಿದೆ. ಇನ್ನೂ ಅನೇಕ ಕಡೆ ಅವರ ಬಗ್ಗೆ ಅಲ್ಲಾಹ್ ಬಹಳ ಪ್ರಶಂಸೆಗಳನ್ನು ಮಾಡಿರುತ್ತಾನೆ. ಸುಲೈಮಾನ್ ನಬಿ ಯವರು ಯಾವುದೇ ಲೋಪದೋಷವಿಲ್ಲದ ಪರಮ ಭಕ್ತರೂ ಅಲ್ಲಾಹನ ನಿಕಟ ದಾಸರೂ ಆಗಿದ್ದರು ಎಂದು ಅಲ್ಲಾಹನು ನೀಡಿದ ಇಂತಹ ಅಂಗೀಕಾ ರಗಳು ಅವರು ಸಂಪೂರ್ಣ ದೋಷಮುಕ್ತರೆಂಬುದಕ್ಕೂ ಅವರ ಮೇಲೆ ಹೊರಿಸಲಾದ ದೋಷಯುಕ್ತ ಕಥೆಗಳೆಲ್ಲ ಕಪೋಲ ಕಲ್ಪಿತವೆಂಬುದಕ್ಕೂ ಸ್ಪಷ್ಟ ಪುರಾವೆಗಳಾಗಿವೆ. ‘ಅವರು ಪಶ್ಚಾತ್ತಾಪಪಟ್ಟು ಮರಳಿದರು’ ಎಂಬ ಪ್ರಸ್ತಾಪದಿಂದ ಪ್ರವಾದಿಗಳು ಗಂಭೀರ ತಪ್ಪು ಮಾಡಿದರು ಎಂಬ ಕಲ್ಪನೆ ಮಾಡಬಾರದು. ಯಾಕೆಂದರೆ ಪ್ರವಾದಿಗಳು ಸಂಪೂರ್ಣ ಪಾಪಮುಕ್ತರು. ಇಸ್ಮತ್ (ಪಾಪರಾಹಿತ್ಯ) ಪ್ರವಾದಿತ್ವದ ಒಂದು ಕಡ್ಡಾಯ ಘಟಕವೆಂದು ವಿಶ್ವಾಸವಿಡುವುದು ನಮ್ಮ ಸತ್ಯವಿಶ್ವಾಸದ ಒಂದು ಅಂಗವಾಗಿದೆ. ಆದ್ದರಿಂದ ಇಂತಹ ಘಟನೆಗಳು ಹಾಗೂ ಪ್ರವಾದಿಗಳು ಪಾಪ ಮುಕ್ತಿ ಬೇಡಿದರು ಎಂಬ ಪ್ರಸ್ತಾಪ ಬರುವಾಗ ಪ್ರವಾದಿಗಳ ಬಗ್ಗೆ ಒಂದು ಸಣ್ಣ ಗುಮಾನಿಯನ್ನು ತಾಳುವುದು ಕೂಡಾ ನಮ್ಮ ಈಮಾನ್ ಅಲುಗಾಡಲು ಹೇತುವಾದೀತು. ಪಾಪ, ಲೋಪಗಳನ್ನೆಲ್ಲ ನಾವು ಅರ್ಥೈಸುವಾಗ ವ್ಯಕ್ತಿಗಳ ಗುಣಮಟ್ಟವನ್ನು ಗಮನಿಸಬೇಕು. ಸಾಮಾನ್ಯ ವ್ಯಕ್ತಿಯ ಮಟ್ಟಿಗೆ ಸಮ್ಮತವೆನಿಸಿದ ಕಾರ್ಯ ದೊಡ್ಡವರ ಮಟ್ಟಿಗೆ ಲೋಪ ವೆನಿಸುತ್ತದೆ. ಇದಕ್ಕೆ ಒಂದು ಉದಾಹರಣೆ: ಲಕ್ಷಾಂತರ ಜನ ಕೂತುಕೊಂಡು ರಾಜನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ವೇದಿಕೆಯಲ್ಲಿ ರಾಜನ ನಿಕಟರು ಆಸೀನರಾಗಿದ್ದಾರೆ. ಅಂತಹ ಸಂದರ್ಭದಲ್ಲಿ ವೇದಿಕೆಗೆ ರಾಜನ ಆಗಮನವಾಗುತ್ತದೆ. ಇಡೀ ಸಭೆಯು ಎದ್ದು ನಿಂತು ಗೌರವ ಸೂಚಿಸುತ್ತದೆ. ಆದರೆ ವೇದಿಕೆಯಿಂದ ಅಂದಾಜು ಒಂದು ಮೈಲು ದೂರದ ವರೆಗೆ ವಿಸ್ತಾರವಾದ ಸಭೆಯ ಕೊನೆಯ ಸಾಲಿನ ಮೂಲೆಯಲ್ಲಿ ಕೂತಿರುವ ಓರ್ವ ವ್ಯಕ್ತಿ ಮಾತ್ರ ಎದ್ದು ನಿಲ್ಲುತ್ತಿಲ್ಲ. ವೇದಿಕೆಯಲ್ಲಿ ಕೂತಿರುವ ರಾಜನ ನಿಕಟರಲ್ಲಿ ಒಬ್ಬನೂ ಎದ್ದು ನಿಲ್ಲುತ್ತಿಲ್ಲ. ಹಾಗಾದರೆ ಈ ಇಬ್ಬರು ತೋರಿದ ಅಗೌರವದ ಗಂಭೀರತೆ ಒಂದೇ ತರವಾಗಿರುವುದಿಲ್ಲ. ಸಭೆಯ ಅಂತಿಮ ಮೂಲೆಯಲ್ಲಿರುವ ಒಬ್ಬ ತೋರಿದ ಅಗೌರವ ಯಾರÀ ಗಮನಕ್ಕೂ ಬಾರದೆ ನಗಣ್ಯವಾಗಬಹುದು. ಆದರೆ ರಾಜನ ಸನಿಹದಲ್ಲೇ ನಿಕಟ ವ್ಯಕ್ತಿ ತೋರಿದ ಅಗೌರವ ಬಲು ದೊಡ್ಡ ಧಿಕ್ಕಾರವಾಗಿ ಪರಿಗಣಿತವಾಗುತ್ತದೆ. ಅಗೌರವ ತೋರಿದ ಇಬ್ಬರೂ ರಾಜನ ಪ್ರಜೆಗಳು. ಆದರೆ ಇಬ್ಬರ ಪೈಕಿ ಒಬ್ಬನ ಲೋಪ ನಿರ್ಲಕ್ಷಿತವೂ ಮತ್ತೊಬ್ಬನ ಲೋಪ ಗಂಭೀರವಾಗಿ ಪರಿಗಣನಾರ್ಹವೂ ಆದುದು ರಾಜನ ಬಳಿ ಅವರೀರ್ವರಿಗೆ ಇರುವ ಅಂತರದ ವ್ಯತ್ಯಾಸದಿಂದಾಗಿದೆ. “ಹಸನಾತುಲ್ ಅಬ್‍ರಾರಿ ಸಯ್ಯಿಆತುಲ್ ಮುಖರ್ರಬೀನ್” (ಉತ್ತಮರ ಮಟ್ಟಿಗೆ ಹಿತವೆನಿಸಿದ ಕಾರ್ಯ ಅತ್ಯುತ್ತಮರ ಮಟ್ಟಿಗೆ ಪಾಪವಾಗಬಹುದು) ಎಂಬುದೊಂದು ಆಪ್ತ ನುಡಿಯಿದೆ. ಅಲ್ಲಾಹನ ಬಳಿ ಸಾಮಾನ್ಯರ ಮಟ್ಟಿಗೆ ಲೋಪವಲ್ಲದ್ದು ಮಹಾ ತ್ಮರ ಮಟ್ಟಿಗೆ ಲೋಪವೆನಿಸಲು ಕಾರಣ ಇದು ಮಾತ್ರವಲ್ಲ; ಎರಡು ಆಯ್ಕೆಗಳಲ್ಲಿ ಒಂದು ಉತ್ತಮ ಹಾಗೂ ಇನ್ನೊಂದು ಅತ್ಯುತ್ತಮವಾಗಿದ್ದು ಮಹಾ ತ್ಮರು ಅತ್ಯುತ್ತಮದÀ ಬದಲಿಗೆ ಉತ್ತಮವನ್ನು ಆಯ್ಕೆ ಮಾಡಿದ್ದಾಗಿರಬಹುದು. ಇದು ತನ್ನ ಲೋಪವಾಯಿತು ಎಂಬ ಕೊರಗು ಅವರನ್ನು ಕಾಡುತ್ತದೆ. ಅಲ್ಲಾಹನಲ್ಲಿ ಕ್ಷಮೆ ಕೇಳುತ್ತಾರೆ. ಪ್ರವಾದಿಗಳ ಕ್ಷಮಾಯಾಚನೆಯನ್ನು ತಾವು ಈ ಕ್ರಮದಲ್ಲಿ ಅರ್ಥ ಮಾಡಿಕೊಳ್ಳಬೇಕೇ ಹೊರತು ಅವರು ಪಾಪ ಮಾಡಿ ದ್ದರು ಎಂದು ಗ್ರಹಿಸಿಕೊಳ್ಳಬಾರದು.