Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 42

39:42
ٱللَّهُ يَتَوَفَّى ٱلۡأَنفُسَ حِينَ مَوۡتِهَا وَٱلَّتِي لَمۡ تَمُتۡ فِي مَنَامِهَاۖ فَيُمۡسِكُ ٱلَّتِي قَضَىٰ عَلَيۡهَا ٱلۡمَوۡتَ وَيُرۡسِلُ ٱلۡأُخۡرَىٰٓ إِلَىٰٓ أَجَلٖ مُّسَمًّىۚ إِنَّ فِي ذَٰلِكَ لَأٓيَٰتٖ لِّقَوۡمٖ يَتَفَكَّرُونَ ٤٢
ಅಲ್ಲಾಹನು ಆತ್ಮಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುವನು1. ಮರಣ ಹೊಂದದ ಆತ್ಮವನ್ನು ನಿದ್ರಾವಸ್ಥೆಯಲ್ಲಿ ವಶಪಡಿಸಿ ಕೊಳ್ಳುವನು. ತರುವಾಯ ಅವನು ಯಾವುದರ ಮೇಲೆ ಮರಣ ವಿಧಿಸಿರುವನೋ ಅವುಗಳನ್ನು ತಡೆಹಿಡಿಯುತ್ತಾನೆ. ಇತರ ಆತ್ಮಗಳನ್ನು ಒಂದು ನಿರ್ದಿಷ್ಟ ಕಾಲದವರೆಗೆ ಬಿಟ್ಟುಬಿಡುತ್ತಾನೆ. ವಿಚಾರ ಶೀಲರಿಗೆ ಇದರಲ್ಲಿ ಖಂಡಿತ ನಿದರ್ಶನಗಳಿವೆ.
Footnotes
  • [1] ಇಲ್ಲಿನ ‘ಯತವಫ್ಫಾ’ ಎಂಬ ಪದಕ್ಕೆ ಮರಣಗೊಳಿಸುವನು ಎಂದು ಅರ್ಥಕೊಟ್ಟರೆ `ಮರಣದ ವೇಳೆ ಆತ್ಮಗಳನ್ನು ಮರಣಗೊಳಿಸುತ್ತಾನೆ' ಎಂಬ ಅಸಂಗತ ಅರ್ಥ ಬರುತ್ತದೆ. ಆತ್ಮಗಳಿಗೆ ಮರಣವಿಲ್ಲ. ಆದ್ದರಿಂದ ‘ಯತವಫ್ಫಾ’ ಎಂಬುದಕ್ಕೆ ಅದರ ಮೂಲಾರ್ಥವಾದ ಪೂರ್ತಿಗೊಳಿಸುವನು, ಸಂಪೂರ್ಣ ಪಡಕೊಳ್ಳುವನು ಎಂಬುದನ್ನೇ ಕಲ್ಪಿಸಬೇಕಾಗುತ್ತದೆ. ಮರಣ ಹೊಂದಿದವರು ಇಹಲೋಕ ಜೀವನ ಮುಕ್ತಾಯಗೊಳಿಸುವುದರಿಂದ ವಫಾತ್ ಎಂಬ ಪದವನ್ನು ಬಳಸಲಾಗುತ್ತದೆಯೇ ಹೊರತು ವಫಾತ್‍ನ ಮೂಲಾರ್ಥ ಮರಣ ಎಂದಲ್ಲ. ಇಲ್ಲಿ ಆಯತ್‍ನಲ್ಲಿ ಮರಣದ ಮೇಲೆ ವಫಾತ್ ಮಾಡು ವನು ಎಂದ ನಂತರ ಮರಣಗೊಳ್ಳದ ಆತ್ಮವನ್ನು ನಿದ್ದೆಯಲ್ಲೂ ವಫಾತ್ ಮಾಡುವನು ಎಂದಿರುವುದು ಕೂಡಾ ವಫಾತ್ ಮರಣಕ್ಕೆ ಬಳಸಲಾಗಿಲ್ಲ ಎಂಬುದಕ್ಕೆ ಇನ್ನೊಂದು ಪುರಾವೆಯಾಗಿದೆ. ಮರಣ ಹೊಂದದವರಲ್ಲಿ ಆತ್ಮವನ್ನು ನಿದ್ದೆಯಲ್ಲಿ ವಫಾತ್ ಮಾಡುವುದೆಂದರೆ ಪೂರ್ಣವಾಗಿ ತನ್ನ ಸ್ವಾಧೀನದಲ್ಲಿಟ್ಟುಕೊಳ್ಳುವನು ಎಂದರ್ಥ. ಅರ್ಥಾತ್ ಆಯುಷ್ಯ ಮುಗಿಯದ ಆತ್ಮಗಳನ್ನು ಅದರ ನಿದ್ರೆಯ ವೇಳೆ ಬಾಹ್ಯವಾಗಿ ವಿವೇಚನೆ ಹಾಗೂ ಇಂದ್ರಿಯಜ್ಞಾನ ಇಲ್ಲವಾಗುವ ಸ್ಥಿತಿಯಲ್ಲಿ ಹಿಡಿಯಲಾಗುತ್ತದೆ. ಆಂತರಿಕವಾಗಿ ಅಲ್ಲ. ಏಕೆಂದರೆ ಜೀವ, ದೇಹ, ಚಲನೆ ಬಾಕಿಯಾಗುತ್ತದೆ. ಹೀಗಾಗಿ ನಿದ್ರೆಯು, ಬಲವಂತವಾಗಿ ವ್ಯಕ್ತಿಯ ಮೇಲೆ ಹೇರಲಾಗುವ ನಿಸರ್ಗದತ್ತ ನಿತ್ರಾಣದ ವಿಶ್ರಾಂತಿಯಾಗಿದ್ದು ಅದರಿಂದ ಇಂದ್ರಿಯಜ್ಞಾನವು ಚಲನೆಯನ್ನು ಹಾಗೂ ಬುದ್ಧಿಯು ಅನುಭವ ಜ್ಞಾನವನ್ನು ತಡೆಯುತ್ತದೆ. ಎಚ್ಚರದ ವೇಳೆ ಆತ್ಮವು ದೇಹದಲ್ಲಿ ಬಾಹ್ಯ ಹಾಗೂ ಆಂತರಿಕವಾಗಿಯೂ ಚಲನಶೀಲವಾಗುತ್ತದೆ. ಏಕೆಂದರೆ ಆತ್ಮ ಲಘುವಾದ ಜಡವಾಗಿದ್ದು ನೀರು ಹಸಿ ಮರದ ತುಂಡಿನಲ್ಲಿ ಹೇಗೆ ಬೆಸೆದಿದೆಯೋ ಅದೇ ರೀತಿ ದೇಹಾಕೃತಿಯಲ್ಲಿ ಅದು ದೇಹದೊಂದಿಗೆ ಬೆಸೆದಿದೆ.