Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 29

46:29
وَإِذۡ صَرَفۡنَآ إِلَيۡكَ نَفَرٗا مِّنَ ٱلۡجِنِّ يَسۡتَمِعُونَ ٱلۡقُرۡءَانَ فَلَمَّا حَضَرُوهُ قَالُوٓاْ أَنصِتُواْۖ فَلَمَّا قُضِيَ وَلَّوۡاْ إِلَىٰ قَوۡمِهِم مُّنذِرِينَ ٢٩
ಖುರ್‍ಆನನ್ನು ಆಲಿಸಲಿಕ್ಕಾಗಿ ಜಿನ್ನ್‍ಗಳ ಒಂದು ತಂಡವನ್ನು1 ನಾವು ನಿಮ್ಮ ಕಡೆಗೆ ತಿರುಗಿಸಿ ಬಿಟ್ಟ ಸಂದರ್ಭ. ಅವರು (ನೀವು ಖುರ್‍ಆನ್ ಪಠಿಸುತ್ತಿದ್ದ) ಆ ಸ್ಥಳಕ್ಕೆ ಹಾಜರಾದಾಗ `ಮೌನವಾಗಿ ಆಲಿಸಿರಿ’ ಎಂದು (ಪರಸ್ಪರ) ಹೇಳಿದರು. ಓದಿ ಮುಗಿದಾಗ ಅವರು ತಮ್ಮ ಜನಾಂಗದ ಕಡೆಗೆ ಮರಳಿದರು, ತಮ್ಮವರಿಗೆ ಮುನ್ನೆಚ್ಚರಿಕೆ ನೀಡುವವರಾಗಿ.
Footnotes
  • [1] ನÀಫರ್ ಅಂದರೆ ಹತ್ತರ ಕೆಳಗಿನ ತಂಡ. ಆ ತಂಡದಲ್ಲಿ ಏಳು ಜಿನ್ನ್‍ಗಳಿದ್ದುವೆಂದು ಇಬ್ನುಅಬ್ಬಾಸ್‍ರಿಂದ ವರದಿಯಾದ ಹದೀಸ್‍ನಲ್ಲಿದೆ. ಅರೇಬಿಯಾದ ಪಶ್ಚಿಮ ಕಡಲ ತೀರದ ಪ್ರದೇಶವಾದ ತಿಹಾಮದ ದಿಕ್ಕಿಗೆ ಒಂದು ವಿಭಾಗ ಜಿನ್ನ್‍ಗಳು ಬಂದಿದ್ದುವು. ಆಕಾಶದಿಂದ ಜಿನ್ನ್‍ಗಳ ಕದ್ದಾಲಿಕೆಗೆ ಅಗ್ನಿಜ್ವಾಲೆಗಳ ಹೊಡೆತದಿಂದ ತಡೆ ಬರಲಾರಂಭಿಸಿದಾಗ ಅದರ ಕಾರಣ ಕಂಡುಹಿಡಿಯುವ ಸಲುವಾಗಿ ಜಿನ್ನ್‍ಗಳ ಗುಂಪು ನಾನಾ ಕಡೆ ಸುತ್ತಾಡ ತೊಡಗಿದವು. ತಿಹಾಮದ ಕಡೆಗೆ ಹೊರಟಿದ್ದ ಗುಂಪು ನಖ್ಲ ಎಂಬಲ್ಲಿ ನಬಿ, ಸಹಾಬಿಗಳನ್ನು ಕಂಡರು. ನಬಿಯವರು ನಮಾಝ್‍ನಲ್ಲಿ ಖುರ್‍ಆನ್ ಪಾರಾಯಣ ಮಾಡುತ್ತಿರುವುದನ್ನು ಅವರು ಆಲಿಸಿದರು. ಕದ್ದಾಲಿಕೆಗೆ ತಡೆ ಬರಲು ಕಾರಣವಾದ ಹೊಸ ಘಟನೆ ಪ್ರವಾದಿಯವರ ಆಗಮನ ಎಂಬುದನ್ನು ಅವರು ಗ್ರಹಿಸಿಕೊಂಡರು. ಅವರು ತಮ್ಮವರ ಬಳಿಗೆ ತೆರಳಿ ವಿಷಯವನ್ನು ತಿಳಿಸಿ ಅವರಿಗೆ ಬೋಧನೆ ನೀಡಿದರು. ಈ ವಿಷಯವನ್ನೆಲ್ಲ ನಬಿಯವರು ವಹ್ಯ್ ಮೂಲಕ ತಿಳಿದುಕೊಂಡರು. ಇದು ಇಬ್ನು ಅಬ್ಬಾಸ್ ರವರು ನೀಡಿದ ವಿವರಣೆ. ಈ ವಿವರಣೆ ಪ್ರಕಾರ ನಬಿಯವರು ಜಿನ್ನ್‍ಗಳ ಆಗಮನದ ಬಗ್ಗೆ ತಿಳಿದೇ ಇರಲಿಲ್ಲ ಎಂದಾಗುತ್ತದೆ. ಆದರೆ ಇಮಾಮ್ ಅಹ್ಮದ್ ಹಾಗೂ ಮುಸ್ಲಿಮ್ ಮುಂತಾದವರು ಇಬ್ನುಮಸ್‍ಊದರಿಂದ ಉಲ್ಲೇಖಿಸಿದ ಒಂದು ಹದೀಸ್ ಪ್ರಕಾರ ನಬಿಯವರು ಆ ಜಿನ್ನ್‍ಗಳನ್ನು ಕಂಡಿದ್ದಾರೆ ಮತ್ತು ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಆ ಹದೀಸ್ ಹೀಗಿದೆ; “ಒಂದು ದಿನ ರಾತ್ರಿ ನಬಿಯವರನ್ನು ಎಲ್ಲೂ ಕಾಣದೆ ನಾವು ಪರಿಭ್ರಾಂತರಾದೆವು. ಎಲ್ಲಿ ಹುಡುಕಿದರೂ ಎಲ್ಲಿದ್ದಾರೆಂಬ ಸುಳಿವೇ ಇರಲಿಲ್ಲ. ಬೆಳಗ್ಗಾದಾಗ ನಬಿಯವರು ಹಿರಾ ಪರ್ವತದ ಕಡೆಯಿಂದ ಬರುತ್ತಿರುವುದು ಕಾಣಿಸಿತು. “ಜಿನ್ನ್‍ಗಳ ದೂತ ಬಂದು ನನ್ನನ್ನು ಆಹ್ವಾನಿಸಿತು. ನಾನು ಹೋಗಿ ಅವರಿಗೆ ಖುರ್‍ಆನ್ ಓದಿ ಕೇಳಿಸಿದೆ” ಎಂದರವರು. ಆಮೇಲೆ ನಮ್ಮನ್ನು ಕರಕೊಂಡು ಹೋಗಿ ಜಿನ್ನ್‍ಗಳು ಬಂದಿದ್ದ ಕೆಲವು ಕುರುಹುಗಳನ್ನು ತೋರಿಸಿದರು. ಇನ್ನು ಕೆಲವು ಹದೀಸ್‍ಗಳಿದ್ದು ಹೆಚ್ಚಿನವುಗಳನ್ನು ಇಬ್ನುಕಸೀರ್ ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ನಬಿಯವರು ತಿಳಿದೂ ತಿಳಿಯದೆಯೂ, ಗುಪ್ತವಾಗಿಯೂ, ಬಹಿರಂಗವಾಗಿಯೂ ಅವರು ಮತ್ತು ಜಿನ್ನ್‍ಗಳ ಒಡನಾಟ ಧಾರಾಳ ಸಲ ನಡೆದಿದೆಯೆಂದು ಹದೀಸ್‍ಗಳಿಂದ ಸ್ಪಷ್ಟವಾಗುತ್ತದೆ. ಅನೇಕ ಭಾರಿ ಅನೇಕ ಕಡೆಗಳಲ್ಲಿ ಭೇಟಿಯಾದುದರಿಂದ ಬೇರೆ ಬೇರೆ ಹದೀಸ್‍ಗಳಲ್ಲಿ ಭೇಟಿಯಾದ ಸ್ಥಳ ಹಾಗೂ ಭೇಟಿಯಾದ ಜಿನ್ನ್‍ಗಳ ಸಂಖ್ಯೆಯ ಬಗ್ಗೆ ವೈವಿಧ್ಯಮಯ ವರದಿಗಳು ಬಂದಿವೆ. ಇಬ್ನು ಅಬ್ಬಾಸ್ ವರದಿ ಮಾಡಿದ ಹದೀಸ್ ನಬಿಯವರು ಜಿನ್ನ್‍ಗಳನ್ನು ಕಾಣದಿರುವ ಒಂದು ಘಟನೆಯ ಬಗ್ಗೆ ಮಾತ್ರವಾಗಿದ್ದು ಬೇರೆ ಸಂದರ್ಭಗಳಲ್ಲಿ ಕಂಡಿರುವುದಕ್ಕೆ ಆ ಹದೀಸ್ ಎದುರಾಗುವುದಿಲ್ಲ. ಇಬ್ನು ಅಬ್ಬಾಸ್‍ರವರ ಹದೀಸ್‍ನಲ್ಲಿ ಕಂಡ ವಿಷಯವೂ ಬೇರೆಯೇ ಘಟನೆಯಾಗಿರುವುದರಿಂದ ಈ ಹದೀಸ್ ಹಾಗೂ ಇಬ್ನು ಅಬ್ಬಾಸ್‍ರಿಂದ ಹದೀಸ್ ಪರಸ್ಪರ ವೈರುಧ್ಯವೆನಿಸುವುದಿಲ್ಲ ಎಂದು ಇಮಾಮ್ ಬೈಹಖಿ ಪ್ರಸ್ತಾಪಿಸಿದ್ದಾರೆ. (ಇಬ್ನು ಕಸೀರ್) ಬಾಹ್ಯ ಇಂದ್ರಿಯಗಳಿಗೆ ಅಗೋಚರವಾದ ಒಂದು ಪ್ರತ್ಯೇಕ ವರ್ಗ ಜೀವಿಗಳೇ ಜಿನ್ನ್. ಇದಕ್ಕೆ ಜಾನ್ನ್, ಜಿನ್ನತ್, ಜಿನ್ನಿಯ್ಯ್ ಮುಂತಾದ ವಿವಿಧ ಪದಗಳ ಬಳಕೆಯಿದೆ. ಶೈತಾನ್ ಅಂದರೆ ಜಿನ್ನ್‍ಗಳ ಕೂಟದ ಒಂದು ದುಷ್ಟ ಜೀವಿಗಳು. ಅಲಂಕಾರಿಕವಾಗಿ ದುಷ್ಟ ಮನುಷ್ಯರಿಗೂ ಶೈತಾನ ಎನ್ನಲಾಗುವುದು. ಜಿನ್ನ್‍ಗಳನ್ನು ಬೆಂಕಿಯಿಂದ ಸೃಷ್ಟಿಸಲಾಗಿದೆ ಎಂದು ಖುರ್‍ಆನ್ ಹಲವು ಕಡೆಗಳಲ್ಲಿ ಹೇಳಿದೆ. ಜಿನ್ನ್‍ಗಳು ನಮ್ಮನ್ನು ಕಾಣುವರೆಂದೂ ನಾವು ಅವರನ್ನು ಕಾಣಲಾರೆವು ಎಂದೂ ಖುರ್‍ಆನಿನ ಒಂದು ಆಯತ್‍ನಿಂದ (7:27) ವ್ಯಕ್ತ. ಆದರೆ ಇದು ಸಾಮಾನ್ಯ ನಿಯಮ. ಮಹಾತ್ಮರು ಪವಾಡ ರೂಪದಲ್ಲಿ ಕಾಣಲಾರರು ಎಂದು ಇದಕ್ಕೆ ಅರ್ಥವಿಲ್ಲ. ಸಾಮಾನ್ಯರು ಮಲಕ್‍ಗಳನ್ನು ಕಾಣದಿದ್ದರೂ ಪ್ರವಾದಿಗಳು ಮತ್ತು ಇತರ ಕೆಲವು ಮಹಾತ್ಮರು ಮಲಕ್‍ಗಳನ್ನು ಕಂಡ ಘಟನೆಗಳು ಖುರ್‍ಆನಿನಲ್ಲೇ ಇದೆ. ಜಿನ್ನ್‍ಗಳಿಗೆ ಅವರದೇ ಕೂಟದಿಂದ ಪ್ರವಾದಿಗಳು ಬಂದಿದ್ದಾರೆಯೇ, ಮನುಷ್ಯ ಪ್ರವಾದಿಗಳ ಬೋಧನೆ ಅವರಿಗೆ ಅನ್ವಯವಾಗಿತ್ತೇ ಎಂಬ ವಿಷಯದಲ್ಲಿ ತರ್ಕವಿದೆ. ಆದರೆ ಪ್ರವಾದಿವರ್ಯ ರು ಜಿನ್ನ್ ವರ್ಗಕ್ಕೂ ಪ್ರವಾದಿಯಾಗಿದ್ದು ತೌಹೀದ್ ಮುಂತಾದ ಪ್ರಧಾನ ವಿಷಯಗಳು ಅವರಿಗೂ ಬಾಧಕ ಎಂಬ ವಿಚಾರ ಅವಿತರ್ಕಿತ. ಜಿನ್ನ್‍ಗಳಲ್ಲಿ ವಿವಾಹ, ಸಂತಾನೋತ್ಪತ್ತಿ, ಕಾಮ, ಆಹಾರ ಭಕ್ಷಣೆ ಮುಂತಾದವುಗಳು ಇವೆಯೆಂದು ಖುರ್‍ಆನ್ (55: 56, 18: 50) ಮತ್ತು ಹದೀಸ್‍ಗಳಿಂದ ಸ್ಪಷ್ಟವಾಗಿದೆ.