Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 12

49:12
يَٰٓأَيُّهَا ٱلَّذِينَ ءَامَنُواْ ٱجۡتَنِبُواْ كَثِيرٗا مِّنَ ٱلظَّنِّ إِنَّ بَعۡضَ ٱلظَّنِّ إِثۡمٞۖ وَلَا تَجَسَّسُواْ وَلَا يَغۡتَب بَّعۡضُكُم بَعۡضًاۚ أَيُحِبُّ أَحَدُكُمۡ أَن يَأۡكُلَ لَحۡمَ أَخِيهِ مَيۡتٗا فَكَرِهۡتُمُوهُۚ وَٱتَّقُواْ ٱللَّهَۚ إِنَّ ٱللَّهَ تَوَّابٞ رَّحِيمٞ ١٢
ಓ ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿ ಗಳು ಪಾಪಕರವಾಗಿವೆ. ನೀವು ಗೂಡಚಾರಿಕೆ ನಡೆಸದಿರಿ. ನೀವು ಪರಸ್ಪರ ಪರದೂಷಣೆ ಮಾಡದಿರಿ. ನೀವು ಪ್ರತಿಯೊಬ್ಬರು ತನ್ನ ಸಹೋದರ ಮೃತನಾಗಿರುವಾಗ ಅವನ ಕಳೇಬರದ ಮಾಂಸ ತಿನ್ನಲು ಇಷ್ಟಪಡುವಿರಾ? ನೀವದನ್ನು ಅನಿಷ್ಟಪಡುವಿರಿ.1 ಅಲ್ಲಾಹನನ್ನು ಭಯಪಡಿರಿ, ಅಲ್ಲಾಹು ಯಥೇಚ್ಚಪಶ್ಚಾತ್ತಾಪ ಸ್ವೀಕರಿಸುವವನೂ ಪರಮ ದಯಾಳುವೂ ಆಗಿರುತ್ತಾನೆ .
Footnotes
  • [1] “ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಆತ ಇಷ್ಟಪಡÀದ ಸಂಗತಿಗಳನ್ನು ಹೇಳುವುದೇ ಗೀಬತ್ ಎನಿಸಿದ್ದು ಅದು ವ್ಯಕ್ತಿಯ ದೇಹದ ಬಗ್ಗೆಯಿರಲಿ, ಆತನ ಧರ್ಮ, ಆತನ ಇಹಜೀವನ, ಸ್ವಭಾವ, ಸೃಷ್ಠಿ, ಸಂಪತ್ತು, ಪತ್ನಿ ಮಕ್ಕಳು, ಸೇವಕರು, ಉಡುಪು, ಚಲನೆ, ಹೀಗೆ ಆತನಿಗೆ ಸಂಬಂಧಪಟ್ಟ ಯಾವು ದೇ ಕಾರ್ಯವಿರಲಿ. ಪದ ಮೂಲಕ ಇಲ್ಲದೆ ಸಂಜ್ಞೆ ಮೂಲಕವಾಗಿದ್ದರೂ ಅದು ಗೀಬತ್ ಎನಿಸುತ್ತದೆ. ಗೀಬತ್ ಎಂಬುದು ನಾಲಗೆಯ ಆಪತ್ತು ಗಳಲ್ಲಿ ಗಂಭೀರ ವಿಪತ್ತಾಗಿದೆಯೆಂದು ಪ್ರವಾದಿವರ್ಯ ರು ಸ್ಪಷ್ಟಪಡಿಸುತ್ತಾರೆ. ಅಬೂಹುರೈರ ರವರಿಂದ ವರದಿಯಾದ ಹದೀಸ್ ಹೀಗಿದೆ. “ಪ್ರವಾದಿವರ್ಯ ರು ಸಹಾಬಿಗಳನ್ನು ‘ಗೀಬತ್’ ಎಂದರೇನೆಂದು ಪ್ರಶ್ನಿಸಿದರು. ಅವರೆಂದರು ‘ಅಲ್ಲಾಹು ಮತ್ತು ಆತನ ರಸೂಲರೇ ಹೆಚ್ಚು ಬಲ್ಲವರು’. ಪ್ರವಾದಿವರ್ಯ ರು ಉತ್ತರಿಸಿದರು. “ನೀನು ನಿನ್ನ ಸಹೋದರನ ಬಗ್ಗೆ ಆತನಿಗೆ ಇಷ್ಟವಿಲ್ಲದನ್ನು ಹೇಳುವುದು” ಆಗ ಪ್ರಶ್ನೆ ಬಂತು. “ನಾನು ಹೇಳುವಂಥದ್ದು ನನ್ನ ಸಹೋದರನಲ್ಲಿ ಇದ್ದರೆ ನಿಮ್ಮ ಅಭಿಪ್ರಾಯವೇನು?” ಅದಕ್ಕೆ ಅವರು “ನೀನು ಹೇಳುವಂಥದ್ದು ಆತನಲ್ಲಿದ್ದರೆ ನೀನು ಆತನ ಪರನಿಂದೆ ಮಾಡಿದೆ. ಆತನಲ್ಲಿ ಇಲ್ಲದಿದ್ದರೆ ನೀನು ಆರೋಪ ಹೊರಿಸಿದೆ” ಎಂದರು (ಮುಸ್ಲಿಮ್ 4/2000) ಇತರರ ಮೇಲೆ ಕೆಟ್ಟ ಗುಮಾನಿ ಇಡುವುದು, ಅವರ ಹುಳುಕುಗಳನ್ನು ಪರೀಕ್ಷಕ ದೃಷ್ಟಿಯಿಂದ ಪತ್ತೆ ಹಚ್ಚುವುದು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ. ವ್ಯಕ್ತಿಗಳ ನಡುವೆ ವೈಷಮ್ಯಕ್ಕೆ ನಾಂದಿ. ಗಂಡು - ಹೆಣ್ಣುಗಳ ನಡುವೆ ಸಂಬಂಧ ಕಲ್ಪಿಸುವ ವಿಷಯದಲ್ಲೂ ಹೆಚ್ಚಿನವು ಕೇವಲ ಗುಮಾನಿಯಾಗಿರುತ್ತದೆ. ಇದು ಸುಶೀಲೆಯರ ಮೇಲೆ ನಡತೆಗೇಡಿನ ಆರೋಪ ಹರಡುವ ಘೋರ ಪಾಪಕ್ಕೆ ಕಾರಣವಾಗುತ್ತದೆ. ಪರಸ್ಪರ ಹಗೆ - ದ್ವೇಷಗಳಿಗೆ ಹೇತುವಾಗುತ್ತದೆ. ಎಲ್ಲರ ಬಗ್ಗೆ ಸದ್ಭಾವನೆಯು ಉದಾತ್ತ ಗುಣ. “ಪರರ ಕೊರತೆಗಳನ್ನು ನೋಡುವ ಬದಲು ನಿನ್ನ ಕೊರತೆಯನ್ನು ನೋಡು” ಎಂಬ ನಬಿ ವಚನ ಇದಕ್ಕೆ ಪೂರಕ. ಪರದೂಷಣೆಯು ಪರನ ಹೆಣದ ಮಾಂಸ ಭಕ್ಷಣೆಗೆ ಸಮಾನವಾಗಿದೆ. (ಹದೀಸ್) ಆದರೆ ಓರ್ವ ವ್ಯಕ್ತಿಯ ನಿಂದನೆಯನ್ನು ಪ್ರಸ್ತಾಪಿಸುವ ಧರ್ಮಬದ್ಧ ಅನಿವಾರ್ಯತೆಯಿದ್ದರೆ ಅಂತಹ ಸಂದರ್ಭಗಳು ಅದರ ನಿಷೇಧಕ್ಕೆ ಹೊರತಾ ಗಿವೆ. ಇಮಾಮ್ ನವವೀ ಹೇಳುತ್ತಾರೆ. ಧಾರ್ಮಿಕ ಕಾರಣಕ್ಕಾಗಿ ಆರು ಸಂದರ್ಭಗಳಲ್ಲಿ ದೋಷಾರೋಪ ಅನುವದನೀಯವಾಗಿದೆ. 1. ಅಕ್ರಮ: ಒಬ್ಬ ಅಕ್ರಮಿಯ ಬಗ್ಗೆ ಸುಲ್ತಾನ ಇಲ್ಲವೆ ಖಾಝಿಯ ಮುಂದೆ ಇಂಥವನು ನನ್ನನ್ನು ಅಕ್ರಮಿಸಿದ ಎಂದು ಮರ್ದಿತ ಹೇಳಬಹುದು. 2. ನಿಷಿದ್ಧ ಮಾರ್ಗಗಳಿಗೆ ತಡೆ ಹಾಗೂ ತಪ್ಪಿನಿಂದ ಸರಿದಾರಿಗೆ ತರುವಲ್ಲಿ ನೆರವಿನ ಅವಶ್ಯಕತೆ. ಇದನ್ನು ಪೂರೈಸಬಲ್ಲ ವ್ಯಕ್ತಿಯಲ್ಲಿ ಇಂಥವನು ಹೀಗೆ ಮಾಡಿದನು ನೀವು ಆತನನ್ನು ತಡೆಯಬೇಕು ಎಂಬಿತ್ಯಾದಿ ಹೇಳಿಕೆಯನ್ನು ಮಂಡಿಸಬಹುದು. 3. ತಪಾಸಣೆ: ತೀರ್ಪುಗಾರನೊಂದಿಗೆ ಆತ ಮರ್ದಿತನಲ್ಲಿ ಅಕ್ರಮಿಯ ಬಗ್ಗೆ ತಪಾಸಣೆ ನಡೆಸುವಾಗ ಮುಚ್ಚುಮರೆಯಿಲ್ಲದೆ ವಿಷಯ ಪ್ರಸ್ತಾಪಿಸಬಹುದು. ಆದರೂ ಸಾಧ್ಯವಿದ್ದಷ್ಟು ಮಟ್ಟಿಗೆ ಸೂಕ್ಷ್ಮತೆ ಪಾಲಿಸುವುದು ಒಳ್ಳೆಯದು. 4. ಮುಸ್ಲಿಂ ಸಾರ್ವಜನಿಕರನ್ನು ಕೆಡುಕಿನಿಂದ ತಡೆಯುವುದು. ಇದನ್ನು ಹಲವು ವಿಧವಾಗಿ ವಿಂಗಡಿಸಬಹುದು. ಅ. ಹದೀಸ್ ನಿವೇದಕರು, ಸಾಕ್ಷಿಗಳು, ಗ್ರಂಥಕರ್ತರ ಕೊರತೆಗಳನ್ನು ಧರ್ಮರಕ್ಷಣೆಗಾಗಿ ಎತ್ತಿ ಹೇಳುವುದು. ಇದು ಅನುವದನೀಯ ಮಾತ್ರವಲ್ಲ ಕಡ್ಡಾಯವೂ ಆಗುತ್ತದೆ. ಆ. ವಧು-ವರ ಅನ್ವೇಷಣೆಯಲ್ಲಿ ನ್ಯೂನತೆಗಳನ್ನು ತಿಳಿಸಿ ಹೇಳುವುದು. ಇ. ನ್ಯೂನತೆಯಿರುವ ವಸ್ತು ಹಾಗೂ ವಂಚಕ ವರ್ತಕರ ಬಗ್ಗೆ ಖರೀದಿಗಾರರೊಂದಿಗೆ ಉಪದೇಶದ ರೂಪದಲ್ಲಿ ತಿಳಿ ಹೇಳುವುದು. ಆದರೆ ಇದು ತೊಂದರೆ ಕೊಡುವ ಹಾಗೂ ಕೇಡು ಮಾಡುವ ಉದ್ದೇಶದಿಂದ ಆಗಿರಬಾರದು. ಈ. ದುರ್ಮಾರ್ಗಕ್ಕೆ ಸೆಳೆಯುವ ಕರ್ಮಶಾಸ್ತ್ರ ವಿದ್ವಾಂಸ ಇಲ್ಲವೆ ನೂತನವಾದಿಯನ್ನು ಕಂಡರೆ ಆತನ ತಪ್ಪು ಕಲ್ಪನೆಯನ್ನು ನೀಗಿಸಲು ಪ್ರಯತ್ನಿಸಬಹುದು. ಜನಸಾಮಾನ್ಯರನ್ನು ಆತನಿಂದ ತಡೆಯಬಹುದು. ಹಾಗೂ ಆತನ ಪರಿಸ್ಥಿತಿಯ ಅರಿವನ್ನು ಉಪದೇಶದ ರೂಪದಲ್ಲಿ ಕೊಡಬಹುದು. ಉ. ಅಧಿಕಾರಿಯೊಬ್ಬ ತನ್ನ ಅಧಿಕಾರವನ್ನು ಅನರ್ಹವಾಗಿ ಚಲಾಯಿಸಿದರೆ ಹಾಗೂ ಅನರ್ಹರು ಅಧಿಕಾರ ಹಿಡಿದರೆ ಆ ಬಗ್ಗೆ ಮೇಲಿನ ಅಧಿಕಾರಿಗೆ ಸೂಚನೆ ಕೊಡಬಹುದು. ಆದರೆ ಇಲ್ಲಿ ಮೋಸಗಾರಿಕೆ ಬರಬಾರದು. ಸುವ್ಯವಸ್ಥೆ ಕಾಪಾಡಲು ಆತ ತನ್ನಿಂದಾಗುವ ಮುತುವರ್ಜಿ ವಹಿಸುವುದು ಅತ್ಯಗತ್ಯ. 5. ಪಾಪ ಇಲ್ಲವೆ ನೂತನವಾದವನ್ನು ಬಹಿರಂಗಪಡಿಸುವವನಾಗಿರುವುದು. ಇಂಥವನ ಕೊರತೆಯನ್ನು ಜನರಿಗೆ ತಿಳಿಸಿ ಹೇಳಬಹುದು. 5. ಪಾಪ ಇಲ್ಲವೆ ನೂತನವಾದವನ್ನು ಬಹಿರಂಗಪಡಿಸುವವನಾಗಿರುವುದು. ಇಂಥವನ ಕೊರತೆಯನ್ನು ಜನರಿಗೆ ತಿಳಿಸಿ ಹೇಳಬಹುದು. 6. ಪರಿಚಯ: ಉದಾಹರಣೆಗೆ ಕುರುಡ, ಕುಂಟ, ಅಂಗವಿಕಲ, ಒಂಟಿ ಕೈಯವ ಮುಂತಾದ ಅಂಕಿತ ನಾಮಗಳಿಂದಲೇ ಗುರುತಿಸಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದರೆ ಹಾಗೆ ಗುರುತಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಕುಂದುಂಟು ಮಾಡುವ, ಟೀಕಿಸುವ ಉದ್ದೇಶದಿಂದ ಹಾಗೆ ಹೇಳುವುದು ನಿಷಿದ್ಧವಾಗಿದೆ. ಅಂತೂ ಆ ಹೆಸರುಗಳ ಹೊರತಾಗಿ ಪರಿಚಯಗೊಳಿಸಲು ಸಾಧ್ಯವಾದರೆ ಅದುವೇ ಉತ್ತಮ ಎಂಬುವುದರಲ್ಲಿ ಎರಡು ಮಾತಿಲ್ಲ. (ಶರಹುನ್ನವವೀ 16/142 ಅದ್ಸ್‍ಕಾರುನ್ನವವೀ 292 ಫತ್‍ಹುಲ್ ಬಾರಿ 10/471)