Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 2

49:2
يَٰٓأَيُّهَا ٱلَّذِينَ ءَامَنُواْ لَا تَرۡفَعُوٓاْ أَصۡوَٰتَكُمۡ فَوۡقَ صَوۡتِ ٱلنَّبِيِّ وَلَا تَجۡهَرُواْ لَهُۥ بِٱلۡقَوۡلِ كَجَهۡرِ بَعۡضِكُمۡ لِبَعۡضٍ أَن تَحۡبَطَ أَعۡمَٰلُكُمۡ وَأَنتُمۡ لَا تَشۡعُرُونَ ٢
ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪ್ರವಾದಿವರ್ಯರ ಧ್ವನಿಗಿಂತ ಎತ್ತರಿಸಬೇಡಿರಿ! ನೀವು ಪರಸ್ಪರ ಸ್ವರವೆತ್ತಿ ಮಾತನಾಡುವಂತೆ ಪ್ರವಾದಿವರ್ಯರೊಡನೆ ಉಚ್ಚ ಸ್ವರದಲ್ಲಿ ಮಾತನಾಡ ಬೇಡಿರಿ. ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಸುಕೃತಗಳು ನಿಷ್ಪಲವಾಗುವ ಅಪಾಯವಿರುವುದರಿಂದ (ಈ ಆದೇಶ ನೀಡಲಾಗಿದೆ)1.
Footnotes
  • [1] ನಬಿಯವರೊಂದಿಗೆ ಸತ್ಯವಿಶ್ವಾಸಿಗಳ ವರ್ತನೆ ಉಳಿದ ನಾಯಕರಲ್ಲಿ ಅನುಯಾಯಿಗಳ ವರ್ತನೆಗಿಂತ ಭಿನ್ನವಾಗಿದೆ. ನಬಿಯವರನ್ನು ಕೇವಲ ಓರ್ವ ನಾಯಕ ಎಂದು ಮಾತ್ರ ಕಾಣುವಂತಿಲ್ಲ. ಅವರಲ್ಲಿ ಆತ್ಮೀಯವಾದ ಒಂದು ವಿಶೇಷ ಪ್ರೀತಿ ಗೌರವಾದರ ಇರಬೇಕು. ಅವರೊಂದಿಗೆ ಕೇವಲ ವ್ಯವಹಾರಿಕ ಸಂಪರ್ಕವಲ್ಲ, ತಾಯಿ, ತಂದೆ ಮಕ್ಕಳಿಗಿಂತ ಹೆಚ್ಚಿನ ಸಂಬಂಧದಿಂದ ಕೂಡಿದ ಮನದಾಳದ ವ್ಯವಹಾರವದು. ಸಹಾಬಿಗಳ ನಡಾವಳಿ ಹಾಗಿತ್ತು. ಸಹಾಬಿಗಳು ನಬಿಯವರನ್ನು ಆದರಿಸಿದಂತೆ ಯಾವ ರಾಜನನ್ನೂ ಪ್ರಜೆಗಳು ಆದರಿಸಿಲ್ಲ ಎಂದು ಬುಖಾರಿ ಉಲ್ಲೇಖಿತ ಹದೀಸ್‍ನಲ್ಲಿದೆ. ನಬಿವರ್ಯ ರ ಜೀವಿತ ಕಾಲದಲ್ಲಿ ನಮಗೆ ಸ್ವರವೆತ್ತಿ ಮಾತಾಡುವುದು ನಿಷಿದ್ಧವಾದಂತೆ ನಬಿವರ್ಯ ರ ಕಬ್ರ್‍ನ ಬಳಿಯೂ ನಿಷಿದ್ಧವೆಂದು ವಿದ್ವಾಂಸರು ಹೇಳಿದ್ದಾರೆ. ನಬಿಯವರು ಅಲ್ಲಾಹನ ರಸೂಲರೂ, ಪುನೀತರೂ, ಸರ್ವಶ್ರೇಷ್ಠರೂ, ಅದ್ವಿತೀಯ ಜಗದ್ಮಾನ್ಯರೂ ಆಗಿರುವುದು ಮರಣಕ್ಕೆ ಮೊದಲು ಮಾತ್ರವಲ್ಲ, ಈಗಲೂ ಅದೇ ಸ್ಥಾನದಲ್ಲಿರುವರು. ಆದ್ದರಿಂದ ಅವರ ಬಗ್ಗೆ ಪ್ರಸ್ತಾಪ, ಅವರ ನುಡಿಗಳ ಬಗ್ಗೆ ಚರ್ಚೆ, ವಿಶ್ಲೇಷಣೆ, ಅಧ್ಯಯನ ಹಾಗೂ ಅವರ ಮದ್‍ಹ್ ಹೇಳುವ ಮಜ್ಲಿಸ್ ಮುಂತಾದ ಸಂದರ್ಭಗಳಲ್ಲೂ ಅತೀವ ಗೌರವಾದರಗಳನ್ನು ನಾವು ತೋರಬೇಕಾಗಿದೆ. ಈ ಆಯತ್ ಅವತೀರ್ಣವಾದಾಗ ಸಾಬಿತ್ ಎಂಬ ಸಹಾಬಿಯೊಬ್ಬರು ತೀವ್ರ ದುಃಖದಿಂದ ಅಳತೊಡಗಿದರು. ಅವರ ಧ್ವನಿ ಸಹಜವಾಗಿ ಸ್ವಲ್ಪ ದೊಡ್ಡದಾಗಿತ್ತು. ಆದ್ದರಿಂದ ಇದು ನನ್ನ ಬಗ್ಗೆಯೇ ಬಂದ ಆಯತ್. ನಾನು ನಬಿಯವರ ಬಳಿ ಧ್ವನಿ ಎತ್ತಿ ಮಾತನಾಡಿದ್ದೇನೆ. ನನ್ನ ಸುಕೃತಗಳೆಲ್ಲ ನಿಷ್ಪಲವಾಗಿ ನಾನು ನರಕಕ್ಕೆ ಹೋಗುವಂತಾಗಿದೆ ಎನ್ನುತ್ತಾ ಮನೆಯಿಂದ ಹೊರಗಿಳಿಯದೇ ತನಗೆ ತಾನೇ ಗೃಹಬಂಧನ ವಿಧಿಸಿಕೊಂಡು ತೀವ್ರ ವ್ಯಥೆಯಿಂದ ಅಳತೊಡಗಿದ್ದರು. ವಿಷಯವನ್ನರಿತ ಪ್ರವಾದಿವರ್ಯ ರು ಸಾಬಿತ್ ರನ್ನು ಕರೆಸಿ ಈ ಆಯತ್ ನಿಮ್ಮ ಬಗ್ಗೆ ಅಲ್ಲ ಎಂದು ಸಮಾಧಾನಪಡಿಸುತ್ತಾ ನೀವು ಉತ್ತಮ ಜೀವನ ನಡೆಸುವಿರಿ, ಹುತಾತ್ಮನಾಗಿ ಮರಣ ಹೊಂದುವಿರಿ ಮತ್ತು ಸ್ವರ್ಗಕ್ಕೆ ಹೋಗಲಿರುವಿರಿ’ ಎಂದು ಹೇಳಿದರು. ಸಾಬಿತ್‍ರವರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಅಬೂಬಕರ್ ಸಿದ್ದೀಕ್ ರವರ ಆಡಳಿತ ಕಾಲದಲ್ಲಿ ನಡೆದ ಯಮಾಮ ಯುದ್ಧದಲ್ಲಿ ಸಾಬಿತ್‍ರವರು ಹುತಾತ್ಮರಾದರು. (ಶರಹು ಮುಸ್ಲಿಮ್ 1/412, ಅಬುಸ್ಸುಊದ್ 6/181, ಕುರ್ತುಬಿ 16/307, ಆಲೂಸಿ 19/253. ಇಬ್ನುಕಸೀರ್7/368, ರೂಹುಲ್ ಬಯಾನ್ 14/52. ಅಸ್ನಲ್ ಮತಾಲಿಬ್ 14/244).